ಪ್ರಾಮಾಣ್ಯ

 ಪ್ರಾಮಾಣಸ್ಯ ಭಾವಃ ಪ್ರಾಮಾಣ್ಯಂ. ಪ್ರಮಾಣ ಅಂದರೆ ಪ್ರಮಾಕರಣ. ಒಂದು ಕಾರ್ಯಕ್ಕೆ ಅನೇಕ ಕಾರಣಗಳಿರುತ್ತವೆ. ಅಂಥ ಕಾರಣಗಳಲ್ಲಿ ಯಾವುದು ಅಸಾಧಾರಣವಾದದ್ದೂ ಅದು ಕರಣ ಎನಿಸಿಕೊಳ್ಳುತ್ತದೆ. ಪ್ರಮಾ ಎಂಬುದು ಯಥಾರ್ಥಾನುಭವ, ಅಯಥಾರ್ಥಾನುಭಕ್ಕೆ ಭ್ರಮ ಎಂದು ಹೆಸರು. ಅನುಭವ, ಜ್ಞಾನದ ಒಂದು ಬಗೆ. ಸಂಸ್ಕಾರಮಾತ್ರಜನ್ಯ ಜ್ಞಾನಕ್ಕೆ ಸ್ಮøತಿ ಎಂದೂ ಅದಕ್ಕಿಂತ ಭಿನ್ನವಾದ ಜ್ಞಾನಕ್ಕೆ ಅನುಭವವೆಂದೂ ಹೆಸರು. ತದ್ವತಿ ತತ್ಪ್ರಕಾರಕಾನುಭವೋ ಯಥಾರ್ಥಃ; ನೈವ ಪ್ರಮಾ ಇತ್ಯುಚ್ಚತೇ-ಎಂಬುದೆ ದಾರ್ಶನಿಕರ ಅಭಿಮತ. ಈಗ ಪ್ರಮಾ ಅಂದರೆ ಯಥಾರ್ಥಾನುಭವ, ಅದರ ಕರಣವೇ ಪ್ರಮಾಣ ಎಂದಾಯಿತು. ಈ ಯಥಾರ್ಥಾನುಭವ ನೈಯಾಯಿಕರ ರೀತ್ಯಾ ನಾಲ್ಕು-1. ಪ್ರತ್ಯಕ್ಷ 2. ಅನುಮತಿ 3. ಉಪಮಿತಿ 4. ಶಾಬ್ದ. ಇವುಗಳ ಕರಣಗಳು (ಪ್ರಮಾಣಗಳು) ಕ್ರಮವಾಗಿ 1. ಪ್ರತ್ಯಕ್ಷ 2. ಅನುಮಾನ 3. ಉಪಮಾನ 4. ಶಬ್ಧ. ಈ ಪ್ರಮಾಣಗಳ ಸಂಖ್ಯೆ ಬೇರೆ ಬೇರೆ ಮತದವರ ರೀತ್ಯಾ ಒಂದರಿಂದ ಹತ್ತರವರೆಗೆ ಇದೆ. ಚಾರ್ವಾಕರಿಗೆ ಪ್ರತ್ಯಕ್ಷ ಒಂದೇ ಪ್ರಮಾಣ. ವೈಶೇಷಿಕ ಬೌದ್ಧ ಅರ್ಹತರಿಗೆ ಪ್ರತ್ಯಕ್ಷ. ಅನುಮಾನ-ಎರಡು ಮಾತ್ರ ಪ್ರಮಾಣ. ಸಾಂಖ್ಯರಿಗೆ ವೇದಾಂತಿಗಳಿಗೆ ಮೂರು-ಪ್ರತ್ಯಕ್ಷ, ಅನುಮಾನ, ಆಪ್ತವಚನ (ಶಬ್ಧ), ಮೀಮಾಂಸಕರಲ್ಲಿ ಭಾಟ್ಟರಿಗೂ ವೇದಾಂತಿಗಳಲ್ಲಿ ಒಂದು ಗುಂಪಿನವರಿಗೂ ಮೇಲ್ಕಂಡ ಐದು ಪ್ರಮಾಣಗಳ ಜತೆಗೆ ಅನುಪಲಬ್ಧಿಯೂ ಸೇರಿ ಆರು. ಈ ಆರು ಪ್ರಮಾಣಗಳೇ ವಿಶೇಷವಾಗಿ ದಾರ್ಶನಿಕರಲ್ಲಿ ರೂಢಿಯಲ್ಲಿದ್ದರೂ ಸಂಭವ, ಐತಿಹ್ಯ, ಚೇಷ್ಟಾ, ಪರಿಶೇಷ ಎಂಬ ಇನ್ನೂ ನಾಲ್ಕು ಪ್ರಮಾಣಗಳನ್ನು ಪೌರಾಣಿಕರ ಮುಂತಾದವರು ಅಂಗೀಕರಿಸುತ್ತಾರೆ.
	ಮೇಲೆ ಹೇಳಿದ ಪ್ರಮಾಣಗಳ ಪೈಕಿ ಒಂದೊಂದರಿಂದಲೂ ಉಂಟಾಗತಕ್ಕದ್ದು ಯಥಾರ್ಥಜ್ಞಾನವೆ ಆದರೂ ಅದರ ಯಾಥಾಥ್ರ್ಯದ ವಿಷಯದಲ್ಲಿ ಸಂದೇಹ ಉಂಟಾಗುವುದು ಸಹಜ, ಉದಾಹರಣೆಗೆ-ನಾವು ಒಂದು ಘಟವನ್ನು ಕಂಡಾಗ ಅದು ಘಟ ಎಂಬ ಜ್ಞಾನವುಂಟಾಗುತ್ತದೆ. ಜತೆಜತೆಗೆ ಈ ಘಟಜ್ಞಾನ ಯಥಾರ್ಥವೊ (ಪ್ರಮೆಯೋ) ಅಥವಾ ಅಯಥಾರ್ಥವೋ (ಭ್ರಮವೊ) ಎಂಬ ಸಂದೇಹವೂ ಮೂಡುತ್ತದೆ. ಅಂಥ ಸಂದೇಹವನ್ನು ಪರಿಹರಿಸಿಕೊಳ್ಳಲು ಬೇರೊಂದು ಪ್ರಮಾಣದ ಆವಶ್ಯಕತೆಯಿದೆಯೇ ಅಥವಾ ಸ್ವತಃ ಆ ಪ್ರತ್ಯಕ್ಷ ಪ್ರಮಾಣದಿಂದಲೇ ಸಾಧ್ಯವೆ? ಅಂದರೆ ಯಥಾರ್ಥ ಜ್ಞಾನ ತನ್ನ ಯಾಥಾಥ್ರ್ಯ ಸ್ಥಾಪಿಸಲು ಬೇರೊಂದು ಪ್ರಮಾಣವನ್ನು ಕೋರದೆಯೇ ಸ್ವತಃ ಪ್ರಮಾಣವೆ? ಅಥವಾ ಪರತಹ ಪ್ರಮಾಣವೇ (ಅಂದರೆ ತನ್ನ ಯಾಥಾಥ್ರ್ಯವನ್ನು ಸ್ಥಾಪಿಸಲು ಬೇರೊಂದು ಪ್ರಮಾಣವನ್ನು ಕೋರುತ್ತದೆಯೇ? ಈ ವಿಚಾರದ ಪರಿಶೀಲನೆಗೆ ಪ್ರಾಮಾಣ್ಯವಾದವೆನ್ನುತ್ತಾರೆ.
	ಪ್ರಾಮಾಣ್ಯವನ್ನು ನಾಲ್ಕು ಬಗೆಯಾಗಿ ವಿಂಗಡಿಸಬಹುದು-1. ಸ್ವತಃ ಪ್ರಾಮಾಣ್ಯ ಸ್ವತಃ ಅಪ್ರಾಮಾಣ್ಯ (ಸಾಂಖ್ಯರ ಮತ) 2. ಪರತಹ ಪ್ರಾಮಾಣ್ಯ, ಪರತಃ ಅಪ್ರಾಮಾಣ್ಯ (ನೈಯಾಯಿಕರ ಮತ) 3. ಸ್ವತಃ ಪ್ರಾಮಾಣ್ಯ. ಪರತಃ ಅಪ್ರಾಮಾಣ್ಯ (ಮೀಮಾಂಸಕರ ಮತ) 4. ಪರತಃ ಪ್ರಾಮಾಣ್ಯ, ಸ್ವತಃ ಅಪ್ರಾಮಾಣ್ಯ, (ಬೌದ್ದರ ಮತ). ಸಾಂಖ್ಯರ ರೀತ್ಯಾ ಜ್ಞಾನದ ಯಾಥಾಥ್ರ್ಯ. ಅಯಾಥಾಥ್ರ್ಯ ಎರಡೂ ಸಹಜವಾಗಿಯೇ ತಿಳಿಯುತ್ತದೆ. ಎರಡೂ ಬೇರೆ ಪ್ರಮಾಣಗಳಿಂದಲೇ ತಿಳಿಯಬೇಕಾದ್ದರಿಂದ, ಆ ರೀತಿ ಸಿದ್ಧವಾಗುವವರೆಗೆ ಅವು ತಿಳಿಯುವಂತಿಲ್ಲ ಎಂಬುದು ನೈಯಾಯಿಕರ ಮತ. ಬೌದ್ದರ ಪ್ರಕಾರ ಜ್ಞಾನಸಾಮಾನ್ಯವೆ ಅಯಥಾರ್ಥ; ಬೇರೆ ಸಾಧನಗಳಿಂದ ಸಿದ್ಧವಾದರೆ ಮಾತ್ರ ಅದು ಯಥಾರ್ಥ. ಮೀಮಾಂಸಕರಿಗೆ ಸಾಮಾನ್ಯವಾಗಿ ಜ್ಞಾನ ಯಥಾರ್ಥವೆ. ಬೇರೆ ಸಾಧನಗಳಿಂದ ಅನ್ಯಥಾ ಸಿದ್ದವಾದರೆ ಮಾತ್ರ ಅದು ಅಯಥಾರ್ಥ. ಪ್ರಕೃತ ಪ್ರಮಾತ್ವದ, ಅಂದರೆ ಜ್ಞಾನದ ಯಥಾರ್ಥದ, ನಿರ್ಣಯಮಾತ್ರ ಉದ್ದೇಶವಾಗಿರುವುದರಿಂದ ವಿವಾದ ಪರತಃಪ್ರಾಮಾಣ್ಯವಾದಿಗಳಾದ ನೈಯಾಯಿಕರು ಮತ್ತು ಸ್ವತಃ ಪ್ರಾಮಾಣ್ಯವಾದಿಗಳಾದ ಮೀಮಾಂಸಕರಿಗೆ ಮಾತ್ರ ಸೀಮಿತಗೊಳ್ಳುತ್ತದೆ.
	ಪ್ರಾಮಾಣ್ಯದ ಸ್ವತಸ್ತ್ವದ ಲಕ್ಷಣಗಳನ್ನು ತದಪ್ರಾಮಾಣ್ಯಗ್ರಾಹಕ ಯಾವದ್ ಜ್ಞಾನ ಗ್ರಾಹಕ ಸಾವಗ್ರೀಗ್ರಾಹ್ಯತ್ವಂ ಎಂದು ಹೇಳಲಾಗುತ್ತದೆ. ಈ ಲಕ್ಷಣದಲ್ಲಿರತಕ್ಕ ಮೂರು ಅಂಶಗಳು ಗಮನಾರ್ಹ 1. ಒಂದು ಜ್ಞಾನದ ಯಥಾಥ್ರ್ಯ ಆ ಜ್ಞಾನವನ್ನುಂಟು ಮಾಡತಕ್ಕ ಸಾಧನ ಸಾಮಗ್ರಿಗಳ ಮೂಲಕವಾಗಿಯೇ ಗ್ರಹಿಸಲ್ಪಡುತ್ತದೆ. 2. ಆ ಸಾಧನ ಸಾಮಗ್ರಿಗಳಲ್ಲಿ ಜ್ಞಾನವುಂಟುಮಾಡುವುದಕ್ಕೆ ಸಾಧನವಾದವುಗಳೆಲ್ಲ ಅಡಗಿರಬೇಕು. 3. ಅವುಗಳಲ್ಲಿ ಜ್ಞಾನದ ಯಾಥಾಥ್ರ್ಯಕ್ಕೆ ಬಾಧಕವಾದದ್ದು ಯಾವುದೂ ಇರಕೂಡದು. ಇಂಥ ಸ್ವತಃ ಪ್ರಾಮಾಣ್ಯದ ವಿಷಯದಲ್ಲಿ ನೈಯಾಯಿಕರು ಪ್ರಧಾನವಾಗಿ ಮುಂದಿಡುವ ಆಕ್ಷೇಪಜ್ಞಾನದ ಜತೆಯಲ್ಲೇ ಅದರ ಪ್ರಾಮಾಣ್ಯವೂ ಸಹಜವಾಗಿಯೇ ಉಂಟಾಗುವುದಾದರೆ ಆ ಬಗ್ಗೆ ಸಂದೇಹಕ್ಕೆ ಅವಕಾಶವೆ ಇರುವುದಿಲ್ಲ. ಆದರೆ ನಮಗೆ ಅಂಥ ಸಂದೇಹವುಂಟಾಗುತ್ತದೆಯಲ್ಲ? ಎಂಬುದು. ಉಂಟಾದ ಸಂದೇಹವನ್ನು ಪ್ರಮಾಣಾಂತರದಿಂದ ಪರಿಹರಿಸಿಕೊಂಡ ಮೇಲೆಯೆ ನಮಗುಂಟಾದ ಜ್ಞಾನ ಯಥಾರ್ಥ ಎಂಬ ನಿರ್ಣಯಕ್ಕೆ ಬರಬಹುದು. ಉದಾಹರಣೆಗೆ ಅಪರಿಚಿತವಾದ ಮಾರ್ಗದಲ್ಲಿ ಹೋಗುತ್ತಿರುವವನೊಬ್ಬನಿಗೆ ದೂರದಲ್ಲಿ ನೀರು ಗೋಚರವಾಗುತ್ತದೆ. ಅದು ನೀರು ಎಂಬ ಜ್ಞಾನವೂ ಉಂಟಾಗುತ್ತದೆ. ಆಮೇಲೆ ಅದು ನಿಜವಾಗಿಯೂ ನೀರೆ ಅಥವಾ ಮರೀಚಿಕೆಯ ಎಂಬ ಸಂದೇಹವೂ ಸಹಜವಾಗಿ ಉಂಟಾಗುತ್ತದೆ. ಆಗ ಅವನು ನೀರು ಕಾಣಿಸಿದ ಸ್ಥಳಕ್ಕೆ ಹೋಗಿ ಅಲ್ಲಿ ಆ ನೀರಿನ ಲಾಭವನ್ನು ಪಡೆದಾಗಲೆ ಅವನ ಮೊದಲಿನ ಪ್ರತ್ಯಕ್ಷಜ್ಞಾನದ ಯಥಾಥ್ರ್ಯ ನಿರ್ಣೀತವಾಗುತ್ತದೆ. ಹೀಗೆ ಪ್ರಮಾಣಾಂತರದಿಂದಲೇ ಜ್ಞಾನದ ಯಾಥಾಥ್ರ್ಯ ಸಿದ್ದವಾಗಬೇಕಾಗಿರುವುದರಿಂದ ಪರತಃಪ್ರಾಮಾಣವೇ ಸರಿ ಎಂಬುದು ನೈಯಾಯಿಕರ ವಾದ. ಈ ವಾದದ ಪ್ರಕಾರ ಒಂದು ಜ್ಞಾನದ ಪ್ರಾಮಾಣ್ಯಸಿದ್ಧಿಗೆ ಮತ್ತೊಂದು ಪ್ರಮಾಣ ಬೇಕೆಂದರೆ ಆ ಮತ್ತೊಂದು ಪ್ರಮಾಣದಿಂದುಂಟಾದ ಜ್ಞಾನದ ಪ್ರಾಮಾಣ್ಯಸಿದ್ದಿಗೆ ಬೇರೊಂದು ಪ್ರಮಾಣ ಬೇಕು. ಹೀಗಾಗಿ ಇದು ಅನವಸ್ಥೆಯಲ್ಲಿ ನಿಲ್ಲುವಂತಾಗುತ್ತದೆಂಬುದು ಪರತಃ ಪ್ರಾಮಾಣ್ಯದಲ್ಲಿರುವ ದೊಡ್ಡ ದೋಷವೆಂದು ಸ್ವತಃ ಪ್ರಾಮಾಣ್ಯವಾದಿಗಳಾದ ಮೀಮಾಂಸಕರು ಆಕ್ಷೇಪಿಸುತ್ತಾರೆ.
	ಸ್ವತಃ ಪರತಃ ಪ್ರಾಮಾಣ್ಯದ ವಿವಾದ ಇತರ ಪ್ರಮಾಣಗಳಿಗಿಂತ ವಿಶೇಷವಾಗಿ ಶಬ್ದಪ್ರಮಾಣದಿಂದ ವೇದಗಳ ಪ್ರಾಮಾಣ್ಯವನ್ನು ಸಾಧಿಸುವಾಗ ಉಪಯುಕ್ತವಾಗುತ್ತದೆ ಸ್ವತಃ ಪ್ರಾಮಾಣ್ಯ ಒಪ್ಪುವುದರಿಂದ ವೇದವಾದಿಗಳೆಂದೆ ಪ್ರಸಿದ್ಧರಾಗಿರುವ ಮೀಮಾಂಸಕರ ರೀತ್ಯಾ ವೇದಗಳು ಅಪೌರುಷೇಯ: ಅವುಗಳ ಪ್ರಾಮಾಣ್ಯ ಸ್ವತಃ ಸಿದ್ದ. ಪರತಃ ಪ್ರಾಮಾಣ್ಯವಾದಿಗಳಾದ ನೈಯಾಯಿಕರಿಗೂ ವೇದಗಳು ಪ್ರಮಾಣವೇ ಆದರೂ ಅವರಿಗೆ ಅವು ಸರ್ವಜ್ಞನಾದ ಈಶ್ವರನಿಂದ ಕೃತವಾದ್ದರಿಂದ ಪ್ರಮಾಣ. ಸ್ವತಃ ಅಲ್ಲ. ಅದೇ ಕಾರಣದಿಂದ ಅವು ಅಪೌರುಷೇಯವೂ ಅಲ್ಲ. ಚಾರ್ವಕರು ಬೌದ್ಧರು ಅರ್ಹತರು ಮುಂತಾದ ದಾರ್ಶನಿಕರು ಶಬ್ಬ ಪ್ರಮಾಣವನ್ನೇ ಅಂಗೀಕರಿಸುವುದಿಲ್ಲವಾದ್ದರಿಂದ ಅವರಿಗೆ ವೇದಗಳು ಪ್ರಮಾಣವೇ ಅಲ್ಲ.
(ಎಸ್.ಆರ್.ಎಎನ್.)